ಕಪೋತ1 : ಕೊಲಂಬಿಡೀ ಕುಟುಂಬಕ್ಕೆ ಸೇರಿದ ಹಕ್ಕಿಗಳು. ಇವನ್ನು ಬೆಳವಗಳೆಂದೂ ಕರೆಯುವುದುಂಟು. ಪಾರಿವಾಳಗಳೂ ಇದೇ ಕುಟುಂಬಕ್ಕೆ ಸೇರಿವೆ, ಕಪೋತಗಳಿಗೂ ಪಾರಿವಾಳಗಳಿಗೂ ಗುಣಲಕ್ಷಣಗಳಲ್ಲಿ ಅಷ್ಟೇನೂ ಭಿನ್ನತೆ ಕಂಡುಬರುವುದಿಲ್ಲ. ಈ ಹಕ್ಕಿಗಳನ್ನು ಪಾರಿವಾಳಗಳಿಂದ ಬೇರೆ ಮಾಡಲು ತಾಂತ್ರಿಕ ಭೇದಗಳೂ ಇಲ್ಲ. ಇವು ಸಾಧಾರಣವಾಗಿ ಪಾರಿವಾಳಗಳಿಗಿಂತ ಗಾತ್ರದಲ್ಲಿ ಸಣ್ಣವು.  ನಸುನೀಲಿ, ಕಂದು, ಬೂದು ಅಥವಾ ಈ ಬಣ್ಣಗಳ ಮಿಶ್ರಣ ಇವುಗಳ ಬಣ್ಣ. ಯಾವ ಬಣ್ಣವಿದ್ದರೂ ಹೊಳಪು ಕಾಣುವುದು. ಕೊಕ್ಕು, ತಲೆ, ಕತ್ತು, ದೇಹ, ರೆಕ್ಕೆ, ಕಾಲುಗಳು ಸಾಧಾರಣವಾಗಿ ಪಾರಿವಾಳದ ಹಾಗೇ ಇರುತ್ತವೆ. ಇವು ಸಣ್ಣ ದನಿಯಲ್ಲಿ ಅಥವಾ ಕೂ ಎಂಬ ಶಬ್ದದಲ್ಲಿ ಕೂಗುತ್ತವೆ. ಅನೇಕ ಪ್ರಭೇದಗಳು ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಗುಡ್ಡ ಮತ್ತು ಬಂiÀÄಲು ಪ್ರದೇಶಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಜೊತೆಯಾಗಿ ನೆಲದ ಮೇಲೆ ಅಥವಾ ಮರಗಳ ಮೇಲೆ ವಾಸಿಸುತ್ತವೆ. ಬೀಜ, ಕಾಳು, ಹಣ್ಣು, ಕೀಟ ಮತ್ತು ಹುಳುಗಳು ಇವುಗಳ ಆಹಾರ.

ಇವು ಗೂಡುಗಳನ್ನು ಸಣ್ಣ ಕಡ್ಡಿಗಳಿಂದ ಕಟ್ಟುತ್ತವೆ. ಗೂಡನ್ನು ಗುಡ್ಡ, ಮರದ ತುದಿ, ದೊಡ್ಡ ಕಟ್ಟಡಗಳು, ಮರದ ಪೊಟರೆ ಅಥವಾ ನೆಲದ ಮೇಲಿನ ಸಸ್ಯಗಳ ಮಧ್ಯೆ ನಿರ್ಮಿಸುವುದು ವಾಡಿಕೆ. ಮೊಟ್ಟೆಗಳು ಸಾಮಾನ್ಯವಾಗಿ ಬಿಳುಪು. ಕೆಲವು ಸಾರಿ ಮಾಸಲು ಬಿಳುಪಾಗಿರುತ್ತವೆ. ಪ್ರತಿಯೊಂದು ಸಾರಿಗೂ 1-3 ಮೊಟ್ಟೆಗಳನ್ನಿಡುತ್ತವೆ. ಸಾಧಾರಣವಾಗಿ ಗಂಡು ಹೆಣ್ಣುಗಳೆರಡೂ ಮೊಟ್ಟೆಗಳ ಮೇಲೆ ಕೂತು ಕಾವನ್ನು ಕೊಡುತ್ತವೆ.
ಬಹುಮಟ್ಟಿಗೆ ಬಾಳಿನ ಉದ್ದಕ್ಕೂ ಒಂದು ಗಂಡು ಒಂದೇ ಹೆಣ್ಣಿನೊಡನೆ ವಾಸಿಸುತ್ತದೆ. ಅವುಗಳಲ್ಲೊಂದು ಆಕಸ್ಮಿಕಕ್ಕೊಳಗಾದಾಗ ಇನ್ನೊಂದು ಎಷ್ಟೋ ಕಾಲ ಸುಮ್ಮನಿದ್ದು ಅನಂತರ ಇನ್ನೊಂದನ್ನು ವರಿಸುವುದು. ಕಪೋತಗಳಲ್ಲಿ ಅನೇಕ ವಿಧಗಳುಂಟು. ಬೆಟ್ಟದ ಕಪೋತದ ಬಣ್ಣ ನಸುಬೂದು. ಮರುಗುವ ಕಪೋತದ (ಮೌರ್ನಿಂಗ್ ಡವ್-ಜನೈಡೂರ ಮ್ಯಾಕ್ರೂರ) ವಿಚಾರವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. ಇದರ ಹೃದಯದ ಬಡಿತ ಒಂದು ನಿಮಿಷಕ್ಕೆ 135. ಇದರ ರೆಕ್ಕೆ ಬಡಿತದಿಂದ ಈ ಪಕ್ಷಿಯನ್ನು ಗುರುತಿಸಬಹುದು. ಗಂಡು ಹಕ್ಕಿ ಹೆಣ್ಣು ಹಕ್ಕಿಗೆ ಗೂಡು ಕಟ್ಟುವ ಸ್ಥಳವನ್ನು ತೋರಿಸುತ್ತದೆ ಮತ್ತು ಗೂಡಿಗೆ ಬೇಕಾಗುವ ಪದಾರ್ಥಗಳನ್ನು ಒದಗಿಸುತ್ತದೆ. ಇದು ಮೊಟ್ಟೆಗಳಿಗೆ 21 ದಿನ ಕಾವು ಕೊಡುವುದು. ಋತುಮಾಸ ಮಾರ್ಚಿಯಿಂದ ಅಕ್ಟೋಬರ್ ವರೆಗೆ ವ್ಯಾಪಿಸುತ್ತದೆ. ಚಕ್ರ ಅಥವಾ ಆಮೆ ಕಪೋತ (ರಿಂಗ್ ಡವ್ ಅಥವಾ ಟಟ್ರ್ಲ್‌ಡವ್) ಬೇರೆ ಜಾತಿಯ ಕಪೋತಗಳ ಮೊಟ್ಟೆಗಳಿಗೆ ಕಾವನ್ನು ಕೊಡುವುದು. ಹಣ್ಣು ತಿನ್ನುವ ಕಪೋತ (ಫ್ರೂಟ್ ಡವ್-ಟೆಲಿನೋಪಸ್) ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿದೆ.

ಅನೇಕ ಹೆಸರಿನ ಆಮೆ ಕಪೋತಗಳು (ಟಟ್ರ್ಲ್‌ ಡವ್) ಮತ್ತು ಕೋಗಿಲೆ ಕಪೋತಗಳೂ (ಕಕೂ ಡವ್) ನಮ್ಮ ದೇಶದಲ್ಲಿವೆ. ಇವು ಮ್ಯಾಕ್ರೊಪೈಜಿಯ ಮತ್ತು ಸ್ಟ್ರಪ್ಟೊಪೇಲಿಯ ಜಾತಿಗೆ ಸೇರಿವೆ.

ಭಾರತ, ನೇಪಾಲ, ಭೂತಾನ, ಪಾಕಿಸ್ತಾನ ದೇಶಗಳಲ್ಲಿ ಸು. 20 ಪ್ರಭೇದಗಳಿವೆ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಎರಡು ಪ್ರಭೇದಗಳನ್ನು ವಿವರಿಸಿದ್ದಾರೆ.

ಮಾನವ ಪ್ರ.ಶ.ಪು 3 ಸಹಸ್ರ ವರ್ಷಗಳ ಹಿಂದೆಯೆ ಪಾರಿವಾಳವನ್ನು ಪಳಗಿಸಲು ಆರಂಭಿಸಿದ. ಆದಿಕಾಲದ ಆ ಕಾಡು ಪಾರಿವಾಳದ ಪುರ್ವಜನಿಂದ ಇಂದಿಗೆ ಸು.200ಕ್ಕೂ ಹೆಚ್ಚು ವಿವಿಧ ರೀತಿಯ ತಳಿಗಳು ರೂಪುಗೊಂಡಿವೆ. ಈ ವಿಚಾರವಾಗಿ ಸುದೀರ್ಘವಾದ ಅಧ್ಯಯನವನ್ನು ನಡೆಸಿ ಮೊದಲು ಪರಿಚಯ ಮಾಡಿಕೊಟ್ಟ ಕೀರ್ತಿ ಚಾಲ್ರ್ಸ್‌ ಡಾರ್ವಿನ್ನನಿಗೆ ಸಲ್ಲುತ್ತದೆ.

ಪಾರಿವಾಳಗಳಲ್ಲಿ ಕೆಲವು ಪ್ರಭೇದಗಳಿಗೆ ವಿವಿಧ ರೀತಿಯ ತರಪೇತು ನೀಡಬಹುದು. ದೂರ ಪ್ರಯಾಣದಲ್ಲಿ ನಿರ್ದಿಷ್ಟ ಸ್ಥಳವನ್ನು ಗುರುತಿಟ್ಟುಕೊಂಡು ಹೋಗುವುದು ಮತ್ತು ಹೊರಟ ಸ್ಥಳಕ್ಕೆ ಸರಿಯಾಗಿ ಹಿಂದಿರುಗುವುದು, ಪಂದ್ಯಾಟಗಳಿಗೆ (ರೇಸಿಂಗ್) ಪಳಗಿಸುವುದು. ಟಪಾಲು ಸಾಗಿಸುವುದು ಇತ್ಯಾದಿ ಕಾರ್ಯಗಳನ್ನು ಅವಕ್ಕೆ ಕಲಿಸುವುದು ಸಾಧ್ಯ. ಇಂದಿಗೂ ಕೆಲವು ಸಂದರ್ಭಗಳಲ್ಲಿ ಅಂಚೆಯನ್ನು ಸಾಗಿಸಲು ಪಳಗಿದ ಪಾರಿವಾಳಗಳನ್ನು ಬಳಸುವುದುಂಟು (ನೋಡಿ- ಪಾರಿವಾಳ).                    (ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ